ನಿಜಲಿಂಗಪ್ಪ, ಎಸ್ -
	ವಿಶಾಲ ಮೈಸೂರು ರಾಜ್ಯದ (ಈಗ ಕರ್ನಾಟಕ ರಾಜ್ಯ) ಮಾಜಿ ಮುಖ್ಯಮಂತ್ರಿ. ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದವರು. ತಂದೆ ಅಬ್ಬಲೂರು ಅಡಿವೆಪ್ಪ ಮತ್ತು ತಾಯಿ ನೀಲಮ್ಮ. ಕರ್ನಾಟಕ ರಾಜ್ಯದಲ್ಲಿರುವ, ಹಿಂದೆ ಮದರಾಸು ಪ್ರಾಂತ್ಯದಲ್ಲಿದ್ದ, ಬಳ್ಳಾರಿ ಜಿಲ್ಲೆಯ ಹಲುವಾಗಲು ಎಂಬ ಹಳ್ಳಿಯಲ್ಲಿ ತಂದೆ ಒಬ್ಬ ಸಣ್ಣ ವರ್ತಕರಾಗಿದ್ದರು. ತಾಯಿ ಶಿವಭಕ್ತೆ. ನಿಜಲಿಂಗಪ್ಪನವರು 1902ರ ಡಿಸೆಂಬರ್ 10ರಂದು ಜನಿಸಿದರು. ಇವರ ಅಣ್ಣ ವೀರಪ್ಪ. ಅಕ್ಕ ಪುಟ್ಟಮ್ಮ.

	ನಿಜಲಿಂಗಪ್ಪನವರಿಗೆ ಆರು ವರ್ಷ ಆಗಿದ್ದಾಗ ತಂದೆ ತೀರಿಕೊಂಡರು. ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯಲ್ಲಿದ್ದ ಚಿಕ್ಕಪ್ಪ ರುದ್ರಪ್ಪನವರ ಆಶ್ರಯದಲ್ಲಿ ನಿಜಲಿಂಗಪ್ಪನವರು ಬೆಳೆದರು. ಅಂತೆಯೇ ಇವರು ಸಿದ್ದವನಹಳ್ಳಿ ನಿಜಲಿಂಗಪ್ಪನವರೆನಿಸಿಕೊಂಡಿದ್ದಾರೆ. ನಿಜಲಿಂಗಪ್ಪನವರು ಸಿದ್ದವನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ದಾವಣಗೆರೆಯ ಆಂಗ್ಲೊ-ವನ್ರ್ಯಾಕ್ಕುಲರ್ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನೂ ಪಡೆದು ಚಿತ್ರದುರ್ಗದಲ್ಲಿ ಪ್ರೌಢಶಾಲೆ ಸೇರಿದರು. 1924ರಲ್ಲಿ ಸೆಂಟ್ರಲ್ ಕಾಲೇಜಿನಿಂದ ಪದವಿ ಗಳಿಸಿ 1926ರಲ್ಲಿ ಪುಣೆಯ ನ್ಯಾಯಶಾಸ್ತ್ರ ಕಾಲೇಜಿನಿಂದ ಎಲ್‍ಎಲ್.ಬಿ ಪದವಿ ಸಂಪಾದಿಸಿಕೊಂಡು ವಕೀಲಿಯನ್ನಾರಂಭಿಸಿದರು.

	ನಿಜಲಿಂಗಪ್ಪನವರ ಮೇಲೆ ಇವರ ಚಿಕ್ಕಂದಿನಲ್ಲಿ ಪ್ರಭಾವ ಬೀರಿದವರೆಂದರೆ ಇವರ ತಾಯಿ, ಹಾಗೂ ಇವರ ಉಪಾದ್ಯಾಯರಾಗಿದ್ದ ವೀರಪ್ಪ ಮಾಸ್ತರ್. ಇವರು ಶಾಲೆಕಾಲೇಜುಗಳಲ್ಲಿ ಗಳಿಸಿದ ಆಧುನಿಕ ಶಿಕ್ಷಣದ ಜೊತೆಗೆ ಸಂಪ್ರದಾಯಬದ್ಧ ಶಿಕ್ಷಣವೂ ಸಮರಸವಾಗಿ ಬೆರೆತು ಇವರ ವ್ಯಕ್ತಿತ್ವ ರೂಪುಗೊಂಡಿತು. ಬಸವೇಶ್ವರರ ವಚನಗಳೂ ಶಂಕರಾಚಾರ್ಯರ ದರ್ಶನವೂ ನಿಜಲಿಂಗಪ್ಪನವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದವು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಮಹಾತ್ಮ ಗಾಂಧಿಯವರ ಜೀವನ ವಿಚಾರಗಳಿಗೆ ಇವರು ಮಾರು ಹೋದರು. ನಿಜಲಿಂಗಪ್ಪನವರ ವಿವಾಹವಾಗಿದ್ದು ಇವರಿಗೆ 25 ವರ್ಷ ಆಗಿದ್ದಾಗ (1927). ಪತ್ನಿ ಮುರಿಗೆಮ್ಮನವರು ದಾವಣಗೆರೆಯ ಕೆಳ ಮಧ್ಯಮವರ್ಗದ ಕುಟುಂಬದಿಂದ ಬಂದವರು. ನಿಜಲಿಂಗಪ್ಪನವರ ಆದರ್ಶಗಳನ್ನೂ, ಆಶೋತ್ತರಗಳನ್ನೂ ಅವರು ಚೆನ್ನಾಗಿ ಅರಿತುಕೊಂಡು  ನಿಜಲಿಂಗಪ್ಪನವರಿಗೆ ಸದಾ ಬೆಂಬಲ ನೀಡಿದರು. ನಿಜಲಿಂಗಪ್ಪನವರ ವಿವೇಕ, ವಿಚಕ್ಷಣೆ, ವಾಸ್ತವಿಕ ದೃಷ್ಟಿ, ಪ್ರಸನ್ನಚಿತ್ತ ಇವಕ್ಕೆ ಇವರ ಸಮರಸ ಸಂಸಾರ ಜೀವನ ಬಹಳಮಟ್ಟಿಗೆ ಕಾರಣವೆನ್ನಬಹುದು.

	ನಿಜಲಿಂಗಪ್ಪನವರು ವಿದ್ಯಾರ್ಥಿಯಾಗಿದ್ದಾಗ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ಬೆಳಗಾಂವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ಸ್ವಯಂಸೇವಕರಾಗಿ ಹೋಗಿದ್ದರು. ಆಗಲೇ ಇವರು ಗಾಂಧಿ ತತ್ವಗಳಿಗೆ ಮಾರು ಹೋಗಿದ್ದು. 1931ರಲ್ಲಿ ಗಾಂಧೀಜಿಯವರು ನಡೆಸಿದ ದಾಂಡೀ ಯಾತ್ರೆಯಿಂದಲೂ ಇವರು ಪ್ರಭಾವಿತರಾದರು. 1931ರಿಂದಲೇ ಇವರು ಕಾಂಗ್ರೆಸ್ ಸಂಸ್ಥೆಯತ್ತ ಒಲಿದಿದ್ದರು. ಕಾಂಗ್ರೆಸ್ ಅಧಿವೇಶನಗಳಿಗೆ ಹೋಗುತ್ತಿದ್ದರು. ಆದರೆ ಇವರು ನೇರ ರಾಜಕಾರಣಕ್ಕೆ ಇಳಿದದ್ದು 1936ರಲ್ಲಿ. ಆ ವರ್ಷ ಇವರು ಚಿತ್ರದುರ್ಗ ಜಿಲ್ಲಾ ಕಾಂಗ್ರಸ್ ಸಮಿತಿಯ ಅಧ್ಯಕ್ಷರಾದರು. ಆಗಿನಿಂದ ಸ್ವಾತಂತ್ರ್ಯ ಹೋರಾಟ ಹಾಗೂ ಸಂಸ್ಥಾನದ ಜವಾಬ್ದಾರಿ ಸರ್ಕಾರದ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸತೊಡಗಿದರು. ಹಲವು ಸತ್ಯಾಗ್ರಹಗಳಲ್ಲಿ ಭಾಗವಹಿಸಿ ಅನೇಕ ಸಲ ಕಾರಾಗೃಹವಾಸ ಮಾಡಿದರು. ಕರ್ನಾಟಕ ಪ್ರವಾಸ ಮಾಡಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದರು. ನಿಜಲಿಂಗಪ್ಪನವರು ಒಳ್ಳೆಯ ವಾಗ್ಮಿ. ರಾಜಕೀಯ ವಿಮೋಚನೆ, ಸಮಾಜ ಸುಧಾರಣೆ, ಕರ್ನಾಟಕದ ಸಾಂಸ್ಕøತಿಕ ಹಾಗೂ ರಾಜಕೀಯ ಏಕೀಕರಣ, ಗ್ರಾಮೀಣ ಅರ್ಥ ವ್ಯವಸ್ಥೆಯ ಪುನರುದ್ಧಾರ ಇವುಗಳಲ್ಲಿ ಇವರು ಆಸಕ್ತಿ ವಹಿಸಿದ್ದರು. ಪರಂಪರಾನುಗತವಾದ ಭಾವನೆಗಳೊಂದಿಗೆ ಆಧುನಿಕ ಪ್ರಗತಿಪರ ದೃಷ್ಟಿಯನ್ನು ಸಮನ್ವಯಗೊಳಿಸಲು ಇವರು ಶ್ರಮಿಸಿದರು. ಸ್ತ್ರೀ ಪುರುಷ ಸಮಾನತೆ ಮತ್ತು ವಿಧವಾ ವಿವಾಹವನ್ನು ಇವರು ಪ್ರತಿಪಾದಿಸಿದ್ದಾರೆ.

	ಅರಣ್ಯ ಸತ್ಯಾಗ್ರಹದ ನಿಮಿತ್ತವಾದ  ನಿಜಲಿಂಗಪ್ಪನವರನ್ನು ಆಗಿನ ಮೈಸೂರು ಸರ್ಕಾರ ಬಂಧಿಸಿ ಒಂದೂವರೆ ವರ್ಷಗಳ ಸಶ್ರಮ ಕಾರಾಗೃಹವಾಸದ ಶಿಕ್ಷೆ ವಿಧಿಸಿರುವುದರ ಜೊತೆಗೆ ಇವರ ವಕೀಲಿಯ ಸನದನ್ನು ಹಿಂದಕ್ಕೆ ತೆಗೆದುಕೊಂಡಿತು. ಮತ್ತೆ 1942ರ ಚಲೇಜಾವ್ ಚಳವಳಿಯ ಕಾಲದಲ್ಲಿ ಸರ್ಕಾರ ಇವರನ್ನು ಸ್ಥಾನಬದ್ಧತೆಯಲ್ಲಿಟ್ಟಿತ್ತು.

	ನಿಜಲಿಂಗಪ್ಪನವರು 1945-1946ರಲ್ಲಿ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಗೂ 1948-54ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೂ ಅಧ್ಯಕ್ಷರಾಗಿದ್ದರು. 1945-47ರಲ್ಲಿ ಸಂವಿಧಾನ ಸಭೆಗೂ 1952-56ರಲ್ಲಿ ಲೋಕಸಭೆಗೂ ಸದಸ್ಯರಾಗಿದ್ದರು.

	ದೇಶಕ್ಕೆ ಸ್ವಾತಂತ್ರ್ಯ ಬಂದು ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿತವಾದ ಮೇಲೂ ಇವರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮುಂದುವರಿಸಿದರು. 1956ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಮುಂಬಯಿ ಮತ್ತು  ಮದರಾಸು ಕರ್ನಾಟಕ ಭಾಗಗಳು, ಕೊಡಗು ಹಾಗೂ ಆಗಿನ ಮೈಸೂರು ರಾಜ್ಯ ಸೇರಿ ವಿಶಾಲ ಮೈಸೂರು ರಾಜ್ಯವಾದಾಗ ಇವರು ಈ ರಾಜ್ಯ ಮೊದಲ ಮುಖ್ಯಮಂತ್ರಿಯಾಗಿ, 1958ರ ಏಪ್ರಿಲ್ ವರೆಗೂ ಆ ಹೊಣೆ ನಿರ್ವಹಿಸಿದರು.

	1958ರಲ್ಲಿ ಇವರು ಸಹಕಾರಿ ಕೃಷಿ ಪದ್ದತಿಯ ಅಧ್ಯಯನ ತಂಡದ ಮುಖ್ಯಸ್ಥರೂ ದಿ ಇಂಡಿಯನ್ ಆಯಿಲ್ ಕಂಪೆನಿಯ ಗೌವರಾಧ್ಯಕ್ಷರೂ ಆದರು. ಆ ಸಮಯದಲ್ಲಿ ಇವರು ಮತ್ತೆ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿಯೂ, 1961ರಲ್ಲಿ ಕಾಂಗ್ರೆಸ್ ಪಾರ್ಲಿಮೆಂಟರಿ ಬೋರ್ಡಿನ ಸದಸ್ಯರಾಗಿಯೂ ಆಯ್ಕೆಯಾದರು. 1962-68ರಲ್ಲಿ ಇವರು ಮತ್ತೆ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ವೇಳೆಗೆ ಅಖಿಲ ಭಾರತ ಖ್ಯಾತಿ ಪಡೆದಿದ್ದ ಇವರು 1968ರ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಬೇಕಾಯಿತು. 1967ರ  ಚುನಾವಣೆಯಲ್ಲಿ ಬಹಳಮಟ್ಟಿಗೆ ಪ್ರಭಾವ ಕಳೆದುಕೊಂಡಿದ್ದ ಕಾಂಗ್ರೆಸ್ ಸಂಸ್ಥೆಗೆ ಪುನಶ್ಚೈತನ್ಯ ತುಂಬಲು ಇವರು ಬಹುವಾಗಿ ಶ್ರಮಿಸಿದರು. ಆದರೆ, 1969ರಲ್ಲಿ ಕಾಂಗ್ರೆಸಿನ ಆಡಳಿತ ವಿಭಾಗಕ್ಕೂ ಭಿನ್ನಾಭಿಪ್ರಾಯಗಳು ಬೆಳೆದು ಆ ಸಂಸ್ಥೆ ಒಡೆಯಿತು. ನಿಜಲಿಂಗಪ್ಪನವರು ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿದು 1971ರಲ್ಲಿ ಅದರಿಂದ ನಿವೃತ್ತರಾದರು. ಅನಂತರ ಅದರ ಕೋಶಾಧ್ಯಕ್ಷರಾಗಿದ್ದರು. 1977ರಲ್ಲಿ ಸಂಸ್ಥಾ ಕಾಂಗ್ರೆಸ್ಸು ಇತರ ಕೆಲವು ಪಕ್ಷಗಳೊಡನೆ ಸೇರಿತು, ಜನತಾ ಪಕ್ಷದ ಸ್ಥಾಪನೆಯಾಯಿತು.

	ನಿಜಲಿಂಗಪ್ಪನವರಿಗೆ ಕರ್ನಾಟಕ ವಿಶ್ವವಿದ್ಯಾಲಯ 1968ರಲ್ಲಿ ಗೌರವ ಎಲ್.ಎಲ್.ಡಿ. ಪದವಿಯನ್ನಿತ್ತು ಸನ್ಮಾನಿಸಿತು. 
(ಎಸ್.ವೈ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ